Monday, October 10, 2011

ಅಂಗಳಕ್ಕೆ ಹೊದಿಕೆ!


ಮಳೆಗಾಲ ಪ್ರಾರಂಭವಾಗಿ ಕೆಲವು ದಿನಗಳಲ್ಲಿ ಮನೆಯೆದುರಿನ ಅಂಗಳದಲ್ಲಿ ಕಳೆ ಗಿಡಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಹಾಗೇ ಬಿಟ್ಟರೆ ನಿಯಂತ್ರಿಸುವುದು ಅತೀ ಕಷ್ಟದ ಕೆಲಸ. ಅದಕ್ಕಾಗಿ ದರಗು, ಸೊಪ್ಪು, ಅಡಿಕೆ ಸೋಗೆ, ಅಡಿಕೆ ಹಾಳೆ, ಬಾಳೆ ಎಲೆ ಇತ್ಯಾದಿಗಳನ್ನು ಹಾಸಿ ನಿಯಂತ್ರಿಸುವ ಕ್ರಮವಿದೆ. ನಂತರ ಬೇಸಿಗೆ ಬರುತ್ತಿದ್ದಂತೆ ಹಾಸಿದ ಹಾಸನ್ನು ತೆಗೆಯುವುದರಿಂದ ಅಂಗಳ ಕಳೆರಹಿತವಾಗಿರುತ್ತದೆ. ಅದರಲ್ಲೂ ಅಡಿಕೆ ಬೆಳೆಗಾರನ ಅಂಗಳದಲ್ಲಿ ಕಳೆಯಿದ್ದರೆ ಅಡಿಕೆ ಒಣಗಿಸುವುದು ಬಹಳ ಕಷ್ಟ ಮತ್ತು ಕಳೆರಹಿತವಾದ ಅಂಗಳದಲ್ಲಿ ಒಣಗಿಸಿದ ಅಡಿಕೆಯಷ್ಟು ಉತ್ತಮ ಗುಣಮಟ್ಟವೂ ಇರುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿಕಾರರ ಅಭಾವ ಮತ್ತು ಅತಿಯಾದ ವೇತನದಿಂದ ಕೆಲಸವನ್ನು ಮಾಡುವುದು ಸಾಮಾನ್ಯರಿಗೆ ಹೊರೆ ಮತ್ತು ಕಷ್ಟಕರವಾಗಿದೆ.
ಸದಾ ಕೃಷಿ ಕಾರ್ಯದಲ್ಲಿ ಸುಲಭಕಾರ್ಯ ವಿಧಾನಗಳನ್ನು ಅಳವಡಿಸಲು ಪ್ರಯೋಗಶೀಲರಾದ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಮೂಲೆಮನೆ ಬಿ. ನರಸಿಂಹ ಭಟ್ಟರು ಪ್ಲಾಸ್ಟಿಕ್ ಹಾಳೆಯನ್ನು ಅಡಿಕೆ ಅಂಗಳಕ್ಕೆ ಹಾಸಿ ಕಳೆ ನಿಯಂತ್ರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ 3000 ಚದರ ಅಡಿಯ ಅಡಿಕೆ ಅಂಗಳವನ್ನು ವಿಶಿಷ್ಟವಾಗಿ ಎರಡು ಬದಿಗಳು ಎತ್ತರವಾಗಿದ್ದು ಮದ್ಯಭಾಗ ತಗ್ಗಾಗಿ ನೀರು ಸಂಪೂರ್ಣ ಹರಿದು ಹೋಗುವಂತೆ ನಿರ್ಮಿಸಿದ್ದಾರೆ. ಇದರಿಂದ ಬೇಸಿಗೆಯಲ್ಲಿ ಇಳಿಜಾರು ಪ್ರದೇಶದಲ್ಲೇ ಅಡಿಕೆಯನ್ನು ಹರಡಿ ಮಳೆ ಬರುವ ಲಕ್ಷಣ ಕಂಡುಬಂದಲ್ಲಿ ಅಡಿಕೆ ಮೇಲ್ಬಾಗಕ್ಕೆ ಟರ್ಪಾಲಿನ್ ಹೊದೆಸಿದಾಗ ಮಳೆ ನೀರು ಅಲ್ಲಿ ನಿಲ್ಲದೆ ಸಂಪೂರ್ಣವಾಗಿ ಹರಿದು ಹೋಗುತ್ತದೆ. ಅದು ಅಡಿಕೆ ಒದ್ದೆಯಾಗದಂತೆ ಸಂರಕ್ಷಿಸಲು ಸುಲಭವಾಗುತ್ತದೆ. ಇನ್ನು ಮಳೆಗಾಲದಲ್ಲಿ ಹಾಸಿದ ಪ್ಲಾಸ್ಟಿಕ್ ಹಾಳೆಯ ಮೇಲೆ ಅಡಿಕೆ ಸಿಪ್ಪೆ, ಸುಡು ಮಣ್ಣು, ಎರೆ ಗೊಬ್ಬರ, ಹಟ್ಟಿ ಗೊಬ್ಬರ ಬಳಸಿ ತರಕಾರಿ ಬೆಳೆಸುತ್ತಾರೆ.

ಅಡಿಕೆಯಂಗಳದ ಸಂರಕ್ಷಣೆಯೊಂದಿಗೆ ಪ್ಲಾಸ್ಟಿಕ್ ಹಾಳೆಯ ಮೇಲೆ ಬೆಳೆದ ತರಕಾರಿಯಿಂದ ಆದಾಯವನ್ನು ಗಳಿಸುತ್ತಾರೆ. ಪ್ಲಾಸ್ಟಿಕ್ ಹಾಳೆ ಮಳೆಗಾಲದಲ್ಲಿ ಹೊದೆಸುವದರಿಂದ ಕಳೆಬೆಳೆಯುವುದಿಲ್ಲ ಮಾತ್ರವಲ್ಲ ಕಳೆಗಿಡವನ್ನು ಕೆತ್ತಿ ತೆಗೆಯುವಾಗ ಆಗುವ ಮಣ್ಣಿನ ಸವಕಳಿಗೆ ತಡೆಯುಂಟಾಗಿ ಮಣ್ಣಿನ ಸಂರಕ್ಷಣೆಯೂ ಆಗುತ್ತದೆ. ಜೊತೆಗೆ ಅಂಗಳವನ್ನು ಪ್ರತೀ ವರ್ಷ ರಿಪೇರಿ ಮಾಡುವ ಕೆಲಸವೂ ಉಳಿಯುತ್ತದೆ ಮತ್ತು ಕೊಲಾದ ಅಡಿಕೆಯನ್ನು ಹರಡಲು ಅತ್ಯಂತ ಸುಲಭವಾಗುತ್ತದೆ.
ಒಂದು ಸಲ ವಿಕ್ರಯಿಸಿದ ಪ್ಲಾಸ್ಟಿಕನ್ನು ಸತತವಾಗಿ 2 ರಿಂದ 3 ವರ್ಷ ಬಳಸಲು ಸಾಧ್ಯವಾಗುತ್ತದೆ ಇದರಿಂದ ಅರ್ಥಿಕ ಹೊರೆ ತಪ್ಪುತ್ತದೆ. ಎರಡನೆಯದಾಗಿ ಕಸ ಹಾಕಲು ಮತ್ತು ಅದನ್ನು ತೆಗೆಯಲು ಆಗುವ ಕೂಲಿಯಾಳಿನ ಖರ್ಚು ಉಳಿಯುತ್ತದೆ.
ಪ್ಲಾಸ್ಟಿಕ್ ಪರಿಸರ ಸ್ನೇಹಿಯೂ ಹೌದು, ಅಡಿಕೆ ಬೆಳೆಗಾರನ ಮಿತ್ರನೂ ಹೌದು ಎಂಬುದನ್ನು ಭಟ್ಟರು ಪ್ರಯೋಗದ ಮೂಲಕ ಸಾಭೀತುಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ 08257-270039 (ರಾತ್ರಿ 7 ರಿಂದ 10ರವರೆಗೆ) ಸಂಪರ್ಕಿಸಬಹುದು.

No comments:

Post a Comment